Skip to content

(Track 04)

Popularity · Low

YouTube

Searching YouTube...

Lyrics

ಎಷ್ಟು ಸಾಹಸವಂತ ನೀನೆ ಬಲವಂತ । ಇಷ್ಟದಾಯಕ ಭಳಿ ಭಳಿರೇ ಹನುಮಂತ॥ ಅಟ್ಟುತ ಖಳರನು ಮೆಟ್ಟಿ ಸೀಳುತಲಿ । ಕುಟ್ಟಿ ಚಂಡಾಡಿದ ಧಿಟ್ಟ ನೀನಹುದೋ ॥ ಪ ॥ ರಾಮರಪ್ಪಣೆಯಿಂದ ಶರಧಿಯ ದಾಟಿ । ಆ ಮಹಾ ಅಸುರೆಯ ಸೀಳಿ ಬಿಸಾಟಿ । ಸ್ವಾಮಿ ಕಾರ್ಯವನುಕೂಲದಿ ಯೋಚಿಸಿ । ಪ್ರೇಮದಿ ನಡೆದನು ಆರೆಲೆ ಸಾಟಿ ॥ ೧ ॥ ದೂರದಿಂದಸುರನ ಪುರವನ್ನೇ ನೋಡಿ । ಮನದಿ ಶ್ರೀರಾಮರ ಸ್ಮರಣೆಯಾ ಮಾಡಿ । ಹಾರುತ ಹರುಷದಿ ವರಸಿಲಂಕಿಣಿಯನು । ವಾರಿಜ ಮುಖಿಯಳ ಕಂಡು ಮಾತಾಡಿ ॥ ೨ ॥ ರಾಮರ ಕ್ಷೇಮವ ರಮಣಿಗೆ ಪೇಳಿ । ತಾಮಸ ಮಾಡದೆ ಮುದ್ರಿಕೆಯ ನೀಡಿ । ಭೂಮಿಜೆ ಜಾನಕಿ ಕುರುಡು ನೀಡಲಾಗ । ಆ ಮಹಾವನದೊಳು ಫಲಗಳ ಬೇಡಿ ॥ ೩ ॥ ಕಣ್ಣಿಗೆ ಬೇಕಾದ ಹಣ್ಣು ಸವಿದು । ಹಣ್ಣಿನ ನೆವದಲಿ ಅಸುರರ ಬಡಿದು । ಟಣ್ಣನೆ ಟಣ್ಣನೆ ಹಾರಿ ನೆಗೆದಾಡುತ । ಬಣ್ಣಿಸಿ ಅಸುರರ ಬಲವನು ಮುರಿದು ॥ ೪ ॥ ಶೃಂಗಾರ ವನದಲ್ಲಿದ್ದ ರಾಕ್ಷಸರ ಅಂಗವನಳಿಸಿದ್ಯೋ ಅತಿಶಯ ಶೂರಾ । ನುಂಗಿ ಅಸ್ತ್ರವನು ಅಕ್ಷಯ ಕುವರನ । ಭಂಗಿಸಿ ಬಿಸುಟಿದ್ಯೋ ಬಂದ ರಕ್ಕಸರಾ ॥ ೫ ॥ ದೂರ ಪೇಳುವರೆಲ್ಲ ರಾವಣನೊಡನೆ । ಚೀರುತ ಕರೆಸಿದ ಇಂದ್ರಜಿತುವನ್ನೇ । ಚೋರ ಕಪಿಯನು ಹಿಡಿದುತಾ ಎನ್ನುತ । ಶೂರರ ಕಳಿಸಿದ ನಿಜಸುತರೊಡನೆ ॥ ೬ ॥ ಪಿಡಿದನು ಇಂದ್ರಜಿತು ಕಡುಕೋಪದಿಂದ । ಹೆಡೆಮುರಿಗೆ ಕಟ್ಟಿದ ಬ್ರಹ್ಮಾಸ್ತ್ರದಿಂದ ॥ ಗುಡುಗುಡು ಗುಟ್ಟುತ ಕಿಡಿಕಿಡಿಯಾಗುತ । ನಡೆದನು ಲಂಕೆಯ ಒಡೆಯನಿದ್ದಲ್ಲಿಗೆ ॥ ೭ ॥ ಕಂಡ ರಾವಣನು ಉದ್ದಂಡ ಕಪಿಯನ್ನೆ । ಮಂಡೆಯ ತೂಗುತ ಮಾತನಾಡಿಸಿದ । ಭಂಡು ಮಾಡದೆ ಬಿಡೆ ನೋಡು ಕಪಿಯನೆ । ಕಂಡು ದುರದುರನೆ ನಡೆದನಾಗ ॥ ೮ ॥ ಛಲವ್ಯಾಕೋ ನಿನಗಿಷ್ಟು ಎಲವೋಕೋಡಗನೆ । ನೆಲೆ ಯಾವುದ್ಹೇಳೋ ನಿನ್ನೊಡೆಯನ ಹೆಸರನ್ನ । ಬಲವಂತ ರಾಮರ ಬಂಟ ಬಂದಿಹೆನೋ । ಹಲವು ಮಾತ್ಯಾಕೋ ಹನುಮನೆ ನಾನು ॥ ೯ ॥ ಬಡ ರಾವಣನೆ ನಿನ್ನ ಬಡಿದು ಹಾಕುವೆನು । ಎನ್ನೊಡೆಯನಪ್ಪಣೆಯಿಲ್ಲೆಂದು ತಾಳಿದೆನು । ಪುಡಿಮಾಡುವೆ ಫುಲ್ಲ ರಕ್ಕಸನೆ । ತೊಡೆವೆನು ನಿನ್ನಪಣೆಯ ಅಕ್ಷರವ ॥ ೧೦ ॥ ನಿನ್ನಂತ ದೂತರು ರಾಮರ ಬಳಿಗೆ । ಇನ್ನೆಷ್ಟು ಮಂದಿಗಳುಂಟು ಹೇಳೋ ನೀತ್ವರಿಯಾ । ನನ್ನಂತ ದೂತರು ನಿನ್ನಂತ ಪ್ರೇತರು । ಇನ್ನೂರು ಕೋಟಿ ಕೇಳರಿಯಾ ॥ ೧೧ ॥ ಕಡುಕೋಪದಿಂದಲಿ ಖೂಳ ರಾವಣನು । ಸುಡಿಸುಡಿ ಬಾಲವ ಸುತ್ತಿವಸನನು । ಒಡೆಯನ ಮಾತಿಗೆ ತಡೆಬಡೆಯಿಲ್ಲದೆ । ಒಡನೆ ಮುತ್ತಿದರು ಗಡಿಮನೆಯವರು ॥ ೧೨ ॥ ತಂದಿರುವಸನವ ತಂಡ ತಂಡದಲಿ । ಒಂದೊಂದು ಮೂಟೆ ಎಂಭತ್ತು ಕೋಟಿಯಲಿ । ಚಂದದಿ ಹರಳಿನ ತೈಲದೊಳದ್ದಿಸಿ । ನಿಂದ ಹನುಮನು ಬಾಲವ ಬೆಳೆಸುತ ॥ ೧೩ ॥ ಶಾಲುಶಕಲಾತಿಯು ಸಾಲದೆಯಿರಲು । ಬಾಲೆರ ವಸ್ತ್ರವ ಸೆಳೆದು ತಾರೆನಲು । ಬಾಲವ ನಿಲ್ಲೆಸಿ ಬೆಂಕಿಯನಿಡುತಲಿ । ಕಾಲ ಮೃತ್ಯುವ ಕೆಣಕಿದರಲ್ಲಿ ॥ ೧೪ ॥ ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ । ಇಣುಕಿ ನೋಡುತ ಅಸುರರಣಕಿಸುತ । ಝಣಝಣ ಝಣರೆನೆ ಬಾಲದ ಗಂಟೆಯು । ಮನದಿ ಶ್ರೀರಾಮರ ಪಾದವ ನೆನೆಯುತ ॥ ೧೫ ॥ ಮಂಗಳಂ ಶ್ರೀರಾಮಚಂದ್ರ ಮೂರುತಿಗೆ । ಮಂಗಳಂ ಸೀತಾದೇವಿ ಚರಣಂಗಳಿಗೆ । ಮಂಗಳವೆನುತ ಲಂಕೆಯ ಸುಟ್ಟು । ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ ೧೬ ॥ ಹತ್ತಿತು ಅಸುರನ ಗಡ್ಡಮೀಸೆಗಳು । ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು । ಚಿತ್ತದಿರಾಮರು ಕೋಪಿಸುವರು ಎಂದು । ಚಿತ್ತದಿ ನಡೆದನು ಅಸುರನಿದ್ದೆಡೆಗೆ ॥ ೧೭ ॥ ಸೀತೆಯ ಕ್ಷೇಮವ ಶ್ರೀರಾಮರಿಗೆ ಹೇಳಿ । ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ । ಸೇತುವೆ ಕಟ್ಟಿ ಚದುರಂಗ ಬಲಸಹ । ಮುತ್ತಿತು ಲಂಕೆಯ ಸೂರೆಗೈಯುತಲಿ ॥ ೧೮ ॥ ವೆಗ್ಗಳವಾಯಿತು ರಾಮರ ದಂಡು । ಮುತ್ತಿತು ಲಂಕೆಯ ಕೋಟೆಯ ಕಂಡು । ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ । ಝಗ್ಗನೆ ಪೇಳ್ದರು ರಾವಣಗಂದು ॥ ೧೯ ॥ ರಾವಣ ಮೊದಲಾದ ರಾಕ್ಷಸರ ಕೊಂದು । ಭಾವಶುದ್ಧದಲಿ ವಿಭೀಷಣಬಾಳೆಂದು । ದೇವಿ ಸೀತೆಯ ನೋಡಗೊಂಡಯೋಧ್ಯದಿ । ದೇವ ಶ್ರೀರಾಮ ರಾಜ್ಯವಾಳಿದರು ॥ ೨೦ ॥ ಶಂಖದೈತ್ಯನ ಕೊಂದೆ ಶರಣು ಶರಣಯ್ಯ । ಶಂಖಾಗಿರಿಯಲಿ ನಿಂದ ಹನುಮಂತರಾಯ । ಪಂಕಜಾಕ್ಷ ಹಯವದನ ಕಟಾಕ್ಷದಿ । ಬಿಂಕದಿ ಪಡೆದೆಯೋ ಅಜಪದವಿಯನು ॥ ೨೧ ॥